ನೃತ್ಯ ಮೇಳ -
	ಪ್ರಾಚೀನ ಗ್ರೀಕ್ ನಾಟಕದ ವಿಸ್ಮಯಕಾರಿ ಅಂಗ (ಕೋರಸ್). ಇದು ಎಷ್ಟರಮಟ್ಟಿಗೆ ಕುತೂಹಲ ಕೆರಳಿಸುವ ವಿಚಾರವಾಗಿದೆಯೋ ಅಷ್ಟೂ ಬಗೆಹರಿಸಲಾದ ಸಮಸ್ಯೆಯೂ ಆಗಿದೆ. ಇದು ಹೇಗೆ ಉಗಮಿಸಿತು, ಎಲ್ಲಿ, ಇದರ ಉದ್ದೇಶ ಯಾವುದು, ಇದಕ್ಕೂ ನಾಟಕಕ್ಕೂ ಬಾಂಧವ್ಯ ಹೇಗೆ ಬೆಳೆಯಿತು, ನಾಟಕಕ್ಕೆ ಇದರಿಂದ ಒಳಿತೊ ಕೆಡುಕೋ ಇಂಥ ಪ್ರಶ್ನೆಗಳಲ್ಲಿ ಹಲವಕ್ಕೆ ಉತ್ತರ ಹೇಳುವುದು ಅಸಾಧ್ಯವಾಗಿದೆ; ಕೆಲವಕ್ಕೆ ಉತ್ತರ ಕೊಡಬಹುದಾದರೂ ಖಚಿತವಾಗಿ ಏನನ್ನೂ ಹೇಳುವಂತಿಲ್ಲ. ನೃತ್ಯಮೇಳದ ವಿರಚನೆಯನ್ನು ಕುರಿತೂ ಇದುಮಿತ್ಥಂ ಎಂದು ಹೇಳುವಂತಿಲ್ಲ; ಮೇಧಾವಿ ವಿದ್ವಾಂಸರ ತರ್ಕ ಅನುಮಾನ ಊಹೆಗಳಿಂದ ನಾವು ಇದರ ಬಗ್ಗೆ ಅಲ್ಪಸ್ವಲ್ಪ ಜ್ಞಾನವನ್ನು ಗಳಿಸಬೇಕಾಗಿದೆ, ಅಷ್ಟರಿಂದಲೇ ತೃಪ್ತಿಹೊಂದಬೇಕಾಗಿದೆ.

	ಪಾನದೇವತೆ ಡಯೋನೀಸಸ್ಸನ ಆರಾಧನೆಯ ಪ್ರಕ್ರಿಯೆಗಾಗಿ ವರ್ತುಲಾಕಾರದಲ್ಲಿ ನಿಲ್ಲಿಸಿದ ಹಾಡುವ ಕುಣಿವ ಒಂದು ತಂಡ ಇರುತ್ತಿತ್ತು; ಆ ತಂಡದ ಗುಂಪು ಗೀತಕ್ಕೆ ಡಿತಿರ್ಯಾಂಬ್ ಎಂದು ಅಂಕಿತ. ಅದೇ ನಾಟಕದ ತಾಯಿಬೇರಾಯಿತು. ಹಾಗೆ ಎದ್ದುಬಂದ ನಾಟಕ ಎಷ್ಟೇ ಅನಧೀನ ಕ್ರಮದಲ್ಲಿ ವೃದ್ಧಿಹೊಂದಿದರೂ ಪ್ರಾಚೀನ ಗ್ರೀಕ್ ಅವಧಿಯುದ್ಧಕ್ಕೂ ಮತಾಚರಣೆಯ ಸೋಂಕು ಅದಕ್ಕೆ ಅಂಟಿಕೊಂಡಿದ್ದಿತೇ ವಿನಾ ಅದು ಸಂಪೂರ್ಣವಾಗಿ ಲೌಕಿಕವಾಗಲಿಲ್ಲ. ಆದ್ದರಿಂದ ಗ್ರೀಕ್ ನಾಟಕ ಕೋರಸ್ಸನ್ನು ತನ್ನೊಳಕ್ಕೆ ಏತಕ್ಕೆ ಸೇರಿಸಿಕೊಂಡಿತು ಎಂಬ ಪ್ರಶ್ನೆಯನ್ನು ಕೇಳುವಂತೆಯೇ ಇಲ್ಲ. ಬದಲು, ಕೋರಸ್ಸಿನಿಂದ ಹೇಗೆ ನಾಟಕ ಒಡಮೂಡಿ ಕ್ರಮೇಣ ಅದರ ಹಿಡಿತದಿಂದ ಬಿಡಿಸಿಕೊಂಡು, ಆದಷ್ಟು ಸ್ವೇಚ್ಛೆಯಾಗಿ ಬೆಳೆದು, ನಾಟ್ಯಗೀತ ರಹಿತ ಸಾಹಿತ್ಯ ಪ್ರಕಾರವಾಯಿತು ಎಂಬ ವಿಚಾರ ಮನನಯೋಗ್ಯವಾಗಿದೆ. ನೃತ್ಯ ಮೇಳದವರ ಸಂಖ್ಯೆಯನ್ನು ಉದಾಹರಣೆ ತೆಗೆದುಕೊಳ್ಳೋಣ. ಡಿತಿರ್ಯಾಂಬಿನಲ್ಲಿ ಭಾಗವಹಿಸುತ್ತಿದ್ದವರ ಸಂಖ್ಯೆ 50 ಎಂದು ತಿಳಿದುಬಂದಿದೆ. ಟ್ರ್ಯಾಜಡಿಯ ಪಿತನೆಂದು ಹೆಸರಾಂತಿರುವ ಈಸ್ಕಿಲಸ್ ಮೊದಮೊದಲು ತನ್ನ ರೂಪಕ ಕೃತಿಯಲ್ಲಿ 50 ಮಂದಿಯ ನೃತ್ಯಮೇಳವನ್ನು ವ್ಯವಸ್ಥೆಮಾಡುತ್ತಿದ್ದನೆಂಬ ಅಭಿಪ್ರಾಯವಿದೆ; ಅದಕ್ಕೆ ಸಮ್ಮತಿಸುವುದು ಕಷ್ಟ. ಏತಕ್ಕೆಂದರೆ ಅವನ ಅನೇಕ ನಾಟಕಗಳಲ್ಲಿ ನೃತ್ಯಮೇಳದ ಗಾತ್ರ 12 ಮಾತ್ರ. ತರುವಾಯ ಬಂದ ಸಾಫೊಕ್ಲೀಸ್ ಮೇಳದ ಗಾತ್ರವನ್ನು 12ರಿಂದ 15ಕ್ಕೆ ಹೆಚ್ಚಿಸಿದ; ಅನಂತರ 15ರ ನೃತ್ಯಮೇಳವೇ ಬದಲಾವಣೆ ಏನೂ ಇಲ್ಲದೆ ನಿಂತುಬಿಟ್ಟಿತು.

	ಗ್ರೀಕ್ ನಾಟಕದಲ್ಲಿ ನೃತ್ಯಮೇಳದ ಪಾಲೂ ನಟವರ್ಗದ ಪಾಲೂ ವಿಭಿನ್ನವಾಗಿದ್ದುವು. ಮೊದಲನೆಯದು ಕಡಿಮೆ ಕಡಿಮೆಯಾಗುತ್ತ ಎರಡನೆಯದು ಹೆಚ್ಚುತ್ತ ಹೋದದ್ದೇ ನಾಟಕದ ಇತಿಹಾಸ. ಈಸ್ಕಿಲಸ್ಸನ ಪ್ರಥಮ ಕೃತಿಯಲ್ಲಿ ನೃತ್ಯಗೀತ ಐದನೆಯ ಮೂರರಷ್ಟು; ಕಡೆಯ ಕೃತಿಯಲ್ಲಿ ಐದನೆಯ ಎರಡರಷ್ಟು. ಸಾಫೋಕ್ಲೀಸನಲ್ಲಿ ಮೊದಲು ಮೂರನೆಯ ಒಂದರಷ್ಟು ಕೊನೆಗೆ ಆರನೆಯ ಒಂದರಷ್ಟು. ಯೂರಿಪಿಡೀಸನಲ್ಲಿ ಏಳನೆಯ ಒಂದು ಪಾಲಿನಿಂದ ಹತ್ತನೆಯ ಒಂದಕ್ಕೆ ಇಳಿತಾಯ. ಮುಂದಣ ಕವಿಗಳಲ್ಲಿ ಅದರ ಜಾಗ ಇನ್ನೂ ಕಿರಿದಾಯಿತು. ರೋಮನರ ಕವಿ ಸೆನೆಕ ಆಗಮಿಸಿದ ಹೊತ್ತಿಗೆ ಅದಕ್ಕೆ ನೆಪಮಾತ್ರವಾದ ಕೃತಕ ಅವಕಾಶ ಉಂಟಾಯಿತು. ಇನ್ನೊಂದು ಬಗೆಯಲ್ಲೂ ನೃತ್ಯಮೇಳದ ಪ್ರಭಾವಕ್ಕೆ ಧಕ್ಕೆ ತಟ್ಟುತ್ತ ಬಂದುದ್ದನ್ನು ಕಾಣಬಹುದು. ಕಥಾವಸ್ತುವಾದ ಘಟನಾವಳಿಯಲ್ಲಿ ನೃತ್ಯಕೂಟದ `ಗುಂಪು ವ್ಯಕ್ತಿತ್ವಕ್ಕೆ ಕವಿ ಕೊಡುತ್ತಿದ್ದ ಹೊಣೆಗಾರಿಕೆ ಬೇಗ ಬೇಗ ಮೊಟಕಾಗುತ್ತ ಬಂತು. ಈಸ್ಕಿಲಸ್ಸನ ಸಂವಿಧಾನದಲ್ಲಿ ಕೋರಸ್ಸು ಸಾಮಾನ್ಯವಾಗಿ ಜವಾಬ್ದಾರಿ ಹೊತ್ತ ಒಂದು ಅನುಕಾರ್ಯವಾಗಿತ್ತು; ಅವನ ಕೊನೆಯ ನಾಟಕದಲ್ಲಿ ಅದು ಪ್ರತಿ ನಾಯಕನಂತೆ ಪಾತ್ರವಹಿಸುತ್ತದೆ; ಸಾಫೋಕ್ಲೀಸನ ರಚನೆಯಲ್ಲಿ ನೃತ್ಯ ಕೂಟಕ್ಕೆ ಕಥಾನಾಯಕನೊಂದಿಗೆ ದೇಶಕಾಲ ಸಂಬಂಧವನ್ನು ಇಟ್ಟುಕೊಂಡಿರುವ ಸಹಾನುಭೂತಿಯ ಸಾಕ್ಷಿ ವರ್ಗದ ಸ್ಥಾನ ಮಾತ್ರ ನಾಟಕದ ಆಗುಹೋಗುಗಳಿಗೆ ಅದರಿಂದ ಗಮನಾರ್ಹ ಸಹಾಯವಾವುದೂ ಇಲ್ಲ. ಕೊಂಚಮಟ್ಟಿನ ಉತ್ತೇಜನ ಅಥವಾ ಪ್ರತಿಭಟನೆ ಆದರೂ ಆಗಬಹುದು. ಯೂರಿಪಿಡೀಸನಲ್ಲಿ ಮೇಳದವರು ನಾಯಕ ಅಥವಾ ನಾಯಕಿಯ ನಾಡಿಗೆ ಸೇರಿದವರು ಅಷ್ಟೆ; ಕಾರ್ಯಾವಳಿಯ ಮೇಲೆ ಅವರದ್ದು ಏನೂ ಹಸ್ತಕ್ಷೇಪವಿಲ್ಲ. ಆ ಕವಿಗೆ ನೃತ್ಯ ಮೇಳ ಸುಮ್ಮನೆ ಹಿನ್ನೆಲೆಯ ಒಂದು ಅಲಂಕಾರವೆಂಬ ಅಭಿಮತವಿತ್ತು. ಅನಂತರ ಬಂದ ದೊಡ್ಡ ಕವಿ ಆಗೆತಾನೆ ಅದನ್ನು ಇನ್ನೂ ಕುಗ್ಗಿಸಿ, ಅದಕ್ಕೂ ನಾಟಕದ ಅನುಕಾರ್ಯರಿಗೂ ಕಾರ್ಯಾವಳಿಗೂ ಏನೇನೂ ಸಂಬಂಧವಿಲ್ಲದಂತೆ ತೀರ ಬೇರ್ಪಡಿಸಿ, ಅದು ಹೆಚ್ಚು ಕಡಿಮೆ ಅಂಕಗಳ ಮಧ್ಯೆ ಜರುಗುವ ಅಪ್ರಸ್ತುತ ವಿನೋದವೂ ಎಂಬಂತೆ ಮಾಡಿದ. ಹೀಗೆ ಹೆಲನಿಕ್ ಮತ್ತು ಹೆಲನಿಸ್ಟಿಕ್ ಅವಧಿಗಳಲ್ಲಿ ನೃತ್ಯಮೇಳ ಕ್ಷೀಣಗೊಳ್ಳುತ್ತ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ದುರ್ಗತಿಗೆ ಸಮೀಪವರ್ತಿಯಾಯಿತು.

	ರೋಮನ್ ಯುಗದಲ್ಲಿ ಮೊದಲು ಬಂದ ನಾಟಕಕಾರರು ಗ್ರೀಕ್ ರೂಪಕದ ಅನುವಾದದ ಅಥವಾ ಅನುಕರಣವನ್ನು ಸಾಧಿಸಿದರು; ಆದರೆ ಅವರ ಕೃತಿಗಳಲ್ಲಿ ಚೂರುಪಾರು ಮಾತ್ರ ಉಳಿದಿರುವುದರಿಂದ ನೃತ್ಯಮೇಳವನ್ನು ಅವರು ಯಾವ ರೀತಿ ಬಳಸಿದರು ಎಂಬುದನ್ನು ನಿರ್ಧರಿಸುವಂತಿಲ್ಲ. ಎರಡು ಶತಮಾನಗಳ ಅನಂತರ, ನಾಟಕದ ಪರಿಸ್ಥಿತಿ ಬಹಳ ಬದಲಾಯಿಸಿದ್ದಾಗ ಬಂದ ಸೆನೆಕ ತನ್ನ ಟ್ರ್ಯಾಜಿಕ್ ಕಾವ್ಯಗಳಲ್ಲಿ ಕೋರಸ್ಸಿಗೆ ತಕ್ಕಮಟ್ಟಿಗೆ ಲಕ್ಷ್ಯವನ್ನಿತ್ತ. ಅವನು ಯೂರಿಪಿಡೀಸನ ಶ್ರದ್ಧಾವಂತ ಶಿಷ್ಯ; ವಾದವಿವಾದವೆಂದರೆ ಅವನಿಗೆ ಬಲು ಇಷ್ಟ. ಭಾಷಣಗಳನ್ನು ಕಟ್ಟುವುದು ಅವನ ಒಲವಿನ ಕೃಷಿ. ಮೇಲಾಗಿ ಅವನ ಲೇಖನವೆಲ್ಲ ಓದು ಕೊಠಡಿಗೆ ಯುಕ್ತವಾದದ್ದು.

	ನೃತ್ಯಮೇಳದ ಮೇಲ್ಮೆಯ ಸಮಯದಲ್ಲಿ ಅದನ್ನು ಗ್ರೀಕರು ಸಮರ್ಪಕವಾಗಿಯೂ ಉಪಯೋಗಿಸಿಕೊಂಡರೆಂಬುದು ದಿಟ.

ಅದರ ನರ್ತನ-ಸಂಗೀತ ಅಚ್ಚುಕಟ್ಟಾಗಿ ನೆರವೇರುತ್ತ, ಉದಾತ್ತ ಭಾವ ಭಾವನೆಗಳಿಂದ ಪ್ರೇಕ್ಷಕರ ಆಂತರ್ಯವನ್ನು ತುಂಬುತ್ತ, ಕವಿಯ ಘನ ಗಂಭೀರ ಉದ್ದೇಶಕ್ಕೆ ಬೆಂಬಲವೀಯುವ ಧಾರ್ಮಿಕ ಸಾಧನವಾಗಿತ್ತು.

ಕಾಮೆಡಿ ಹಗುರವೂ ಕೇವಲ ಉಲ್ಲಾಸಕರವೂ ಆಗಿರಬೇಕಾಗಿದ್ದುದರಿಂದ ಅದರಲ್ಲಿ ನೃತ್ಯಮೇಳ ನಾಟಕದ ಹೆಸರಿಗೆ ತಕ್ಕಂತೆ ಅಶ್ವಗಳು ಹಕ್ಕಿಗಳು ಮೋಡಗಳು ಇತ್ಯಾದಿ ವಿಧದ ವೇಷ ಧರಿಸಿಕೊಂಡು ಅಂದಚಂದದ ಅನುಕರಣವನ್ನು ನಡೆಸುತ್ತ, ಹರ್ಷವನ್ನು ಹೆಚ್ಚಿಸುತ್ತಿತ್ತು. ಅಭಿನಯದ ಆಳದಲ್ಲಿ ಗಾಢವೂ ಬೋಧಕವೂ ಆದ ಸಂಕೇತಾರ್ಥ ಕುಳಿತಿರುತ್ತಿತ್ತು.

ನಾಟಕದ ಕಾರ್ಯಾವಳಿಯಲ್ಲಿ ಅಷ್ಟಿಷ್ಟು ಬಾಧ್ಯತೆ ನೃತ್ಯತಂಡಕ್ಕೆ ಇದ್ದಲ್ಲೆ ಸರಿಯೇ ಸರಿ; ಇಲ್ಲದಿದ್ದ ಸಂದರ್ಭದಲ್ಲಿ ಅದಕ್ಕೆ ಜನತೆಯ ಮತ್ತು ನೋಟಕರ ಪ್ರತಿನಿಧಿಯಾಗಿ ಮಾತನಾಡುವ ಹಕ್ಕು ಇದ್ದೇ ಇತ್ತು. ಪಾತ್ರಗಳನ್ನೂ ಘಟನಾವಳಿಯನ್ನೂ ಆದಷ್ಟು ನಿಷ್ಪಕ್ಷಪಾತವಾಗಿ ಪರೀಕ್ಷಿಸುವುದೂ ಮುಚ್ಚುಮರೆಯಿಲ್ಲದ ಟೀಕೆ ತೀರ್ಪು ಹೇಳುವುದೂ ಅದರ ಮುಖ್ಯ ಕೆಲಸವಾಗಿದ್ದಿತಾಗಿ ಅದನ್ನು ಆದರ್ಶಪ್ರೇಕ್ಷಕ ಎಂದು ಕರೆಯುತ್ತಿದ್ದರು. ಇದಕ್ಕೆ ಸಾಫೊಕ್ಲೀಸನ ನೃತ್ಯಮೇಳ ಸುಂದರ ನಿದರ್ಶನ.

ನೃತ್ಯಕೂಟದವರೆಲ್ಲ ಶ್ರೀಮಂತಿಕೆಯಿಂದ ಕೆಳಗಣ ಸಾಧಾರಣ ಮಟ್ಟದವರು. ಆಲೋಚನೆ ವಚನ ಕರ್ಮ ಎಲ್ಲದರಲ್ಲೂ ಅವರದ್ದು ಮಂದಗತಿ. ಪೂರ್ವಾಚರವತ್ಸಲರು, ಸಂಪ್ರದಾಯ ಪಾಲಕರು. ಹೆಬ್ಬಯಕೆ ಅತ್ಯುತ್ಸಾಹ ದುಡುಕುಗಳಿಂದ ಕೂಡಿದ ಅನುಕಾರ್ಯರೊಡನೆ ಹೋಲಿಸಿದರೆ ಅವರು ದಿಟವಾಗಿ ಹಿಂಬೀಳಿಕೆಯ ಮಂದಿ. ಈ ವ್ಯತ್ಯಾಸದಿಂದ ನಾಟಕಕ್ಕೆ ಅಗತ್ಯವಾದ ವೈದೃಶ್ಯವೂ ತುಡಿತವೂ ಒದಗುತ್ತಿದ್ದುವು; ರಂಗಸ್ಥಳದ ಓಟ ನೃತ್ಯವರ್ತುಲದ ನಿಧಾನಗಳಿಂದ ಒಂದು ಬಗೆಯ ಬಿಗುಪೂ ಬಿಕ್ಕಟ್ಟೂ ಸೂಚಿತವಾಗಿ ಪ್ರೇಕ್ಷಕ ಸಂದೋಹಕ್ಕೆ ಕಲಾಹ್ಲಾದ ಪೆಗ್ಗಳಿಸುತ್ತಿತ್ತು.
ಸಾಮಾನ್ಯವಾಗಿ ಮನುಷ್ಯರಿಗೆ ಬಣ್ಣಬಣ್ಣದ ಅಂಶಗಳಿಂದ ಸಂಯೋಜಿತವಾದ ದೃಶ್ಯವೆಂದರೆ ಮೈಯೆಲ್ಲ ಕಣ್ಣು. ಪ್ರಾಚೀನ ಗ್ರೀಕರು ಪೂರ್ಣಾರ್ಥದಲ್ಲಿ ಮಾನವರು. ಅವರ ನಾಟಕ ಶಾಲೆಯಲ್ಲಿ ರಮಣೀಯ ನೋಟವನ್ನು ಒದಗಿಸುವ ಸಾಧನಗಳಲ್ಲಿ ನೃತ್ಯಮೇಳ ಪ್ರಾಯಶಃ ಮೆಚ್ಚುಗೆಯದಾಗಿತ್ತು.

	ಸಂಗೀತ ನೃತ್ಯಗಳಿಂದ ನಾಟಕ ಬಹುಮಟ್ಟಿಗೆ ಬಹುಶಃ ಪೂರ್ತಿಯಾಗಿ ಬೇರೆ ಆಯಿತು. ಗೀತರೂಪಕ ಎಂಬ ಹೆಸರಿನ ಹೊಸ ನಮೂನೆ ಎದ್ದು ಬಂದು ನಾಟಕ ಸಾಹಿತ್ಯಪ್ರಬೇಧ ಎನ್ನಿಸಿಕೊಂಡಿತು. ಆದರೂ ಕೋರಸ್ ಎಂಬುದರ ಆಕರ್ಷಣೆ ಅಲ್ಲಲ್ಲಿ ಆ ಈ ಸಾಹಿತಿಗಳ ಮೇಲೆ ಬೀಳುತ್ತಲೇ ಬಂತು; ಬಂದಿದೆ. ಯಾವ ಕಾಲದಲ್ಲಿ ಯಾವ ಕವಿ ಅದನ್ನು ಸಾರ್ಥಕವಾಗಿ ಪುನರುಜ್ಜೀವಿಸುವನೋ ಭವಿಷ್ಯ ನುಡಿಯುವಂತಿಲ್ಲ. ಸೆನೆಕ ಹಾಗಿರಲಿ ಮಿಲ್ಟನ್, ರಾಸೀನ್, ಗಯಟೆ, ಷೆಲಿ, ಸ್ವಿನ್‍ಬರ್ನ್ ಮೊದಲಾದವರು ಅದನ್ನು ಧೈರ್ಯವಾಗಿ ಬಳಸಿಕೊಂಡರು. ಈಚಿನ ಕವಿಗಳಾದ ಓಕ್ಯಾಸಿ, ಎಲಿಯಟ್, ಆಡನ್, ಇಷರ್‍ವುಡ್ ಮುಂತಾದವರೂ ಅದರಿಂದ ಪ್ರಯೋಜನ ಪಡೆದಿದ್ದಾರೆ.

	ಕೋರಸ್ಸನ್ನು ಹೆಸರಿಟ್ಟು ಯಥಾವತ್ತಾಗಿ ಉಪಯೋಗಿಸಿಕೊಳ್ಳದಿದ್ದರೂ ಯೂರೋಪಿನ ರೂಪಕ ಅದಕ್ಕೆ ಕೆಲ ಅಂಶಗಳಲ್ಲಿ ಸಮನಾದ ಒಂದು ಉಪಾಯವನ್ನು ಕಂಡುಹಿಡಿಯಿತು. ಕಥಾನಾಯಕನ ಜೊತೆಯಲ್ಲಿ ಇದ್ದುಕೊಂಡು ಸಮಯೋಚಿತ ಸಲಹೆ ನೀಡುತ್ತ ನೆರವಾಗುವ ಸಖ; ಹಾಗೆಯೇ ನಾಯಕಿಗೆ ನೆರವಾಗುವ ಸಖಿ. ಮುಖ್ಯ ಪಾತ್ರದ ಒಡನಾಡಿಗಳಾದರೂ ಆ ಪಾತ್ರಗಳು ಕೆಲವೊಮ್ಮೆ ಮೈತ್ರಿ ಮೋಹಗಳಿಂದ ಕಳಚಿಕೊಂಡು, ಸೌಹಾರ್ದದ ವೀಕ್ಷಕರಂತೆ ಮಾತನಾಡುತ್ತವೆ. ಆದರೂ ಅವು ಕೋರಸ್ಸಿನ ಛಾಯೆ ಅಷ್ಟೆ. ಷೇಕ್ಸ್‍ಪಿಯರನ ಕೃತಿಗಳಲ್ಲಿ ಅಂಥ ಪಾತ್ರಕ್ಕೆ ಸ್ವಲ್ಪ ಪ್ರವೇಶವಿದೆ; ಸ್ಪೇನಿನ ಮತ್ತು ಫ್ರಾನ್ಸಿನ ನಾಟಕಗಳಲ್ಲಿ ಇನ್ನೂ ಹೆಚ್ಚು ಅವಕಾಶವುಂಟು.

	ಇದಲ್ಲದೆ ಫ್ರೆಂಚ್ ನಾಟಕ ವಾಗ್ವಾದಿ ಅಥವಾ ಸಮದರ್ಶಿ ಎನ್ನಬಹುದಾದ ಒಂದು ಪಾತ್ರವನ್ನು ನಿರ್ಮಿಸಿತು. ಮೊದಲು, ಸಾಮಾಜಿಕ ಸಮಸ್ಯೆಯೊಂದನ್ನು ಕುರಿತ ನಾಟಕದಲ್ಲಿ ಅದು ಅವಶ್ಯಕವಾಗಿ ಕಂಡು ಬಂದಿತು. ಕಾರ್ಯಾವಳಿಯ ತಾತ್ಪರ್ಯವನ್ನು ವಿವರಿಸುತ್ತ ವಿಚಾರಣೆಗೆ ಸಹಾಯ ಮಾಡುತ್ತ ಕಾವ್ಯದ ವಿಷಯ ಏನೆಂಬುದರ ಮೇಲೆ ಬೆಳಕು ಚೆಲ್ಲುವುದೇ ಸಮದರ್ಶಿಯ ಕೆಲಸ. ಹೆನ್ರಿಕ್ ಇಬ್ಸೆನ್ನನ ಕೆಲವು ಕೃತಿಗಳಲ್ಲಿ ಅವನಿಗೆ ತಕ್ಕ ಸ್ಥಾನ ದೊರೆತಿದೆ. ಎಷ್ಟೋ ಸಾರಿ ಈ ವಾಗ್ವಾದಿ ನಾಟಕಕಾರನ ನಾಲಗೆ. ತಾನು ಸೃಷ್ಟಿಸಿದ ವ್ಯಕ್ತಿಗಳ ಕಾರ್ಯರಂಗಕ್ಕೆ ಹತ್ತಿ ತನ್ನ ಸ್ವಕೀಯ ಅಭಿಪ್ರಾಯವನ್ನು ಮಂಡಿಸುವುದಕ್ಕೆ ನಾಟಕಕಾರನಿಗೆ ಅಪ್ಪಣೆಯಾಗಲಿ ಆಸ್ಪದವಾಗಲಿ ಇಲ್ಲವೇ ಇಲ್ಲ. ಆದ್ದರಿಂದ ನಾಟಕದ ಒಂದು ಪಾತ್ರವನ್ನು ಆರಿಸಿಕೊಂಡು ತನ್ನ ವೈಯಕ್ತಿಕ ಹೇಳಿಕೆಗಳನ್ನು ಅದರ ಬಾಯಿಂದ ಆಡಿಸಬೇಕಾಗುತ್ತದೆ. ಈ ನಾಟಕದಲ್ಲಿ ಈ ಪಾತ್ರ ಕೋರಸ್ ಪಾತ್ರ ಎಂದು ನಿಶ್ಚೈಸುವುದಕ್ಕೆ ಮುನ್ನ ತುಂಬ ಎಚ್ಚರಿಕೆಯಿಂದಲೂ ವಿಚಕ್ಷಣೆಯಿಂದಲೂ ನಾವು ನಾಟಕವನ್ನು ಪರಿಶೀಲಿಸತಕ್ಕದ್ದು. ಏತಕ್ಕೆಂದರೆ ಅತ್ಯುತ್ತಮ ನಾಟಕಕಾರನಿಗೆ ಮಮತೆಯಾಗಲಿ ಮತ್ಸರವಾಗಲಿ ಹೊಂದಿಕೊಳ್ಳದ ಭಾಗ; ಅವನು ಪಕ್ಷಾತೀತ; ಅವನು ಯಾರನ್ನೂ ಹೊಗಳಲಾರ, ಯಾರನ್ನೂ ತೆಗಳಲಾರ. ಅವನು ನಮ್ಮ ಮುಂದೆ ಹರಡುವ ರೂಪಕ ಪ್ರಪಂಚದ ಭಾವಾರ್ಥವನ್ನು ಗ್ರಹಿಸಿ ವಿಮರ್ಶೆ ಮಾಡಿ ಸರಿಯಾದ ಫಲ ಪಡೆಯುವುದಕ್ಕೆ ನಮ್ಮ ನಮ್ಮ ಬುದ್ಧಿ ಸಾಲದೆ? ಹಾಗಿದ್ದ ಮೇಲೆ ಕೋರಸ್ ಪಾತ್ರ ಏತಕ್ಕೆ?			(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ